ಬುಂದೇಲ್‍ಖಂಡ್ ನೀಸ್
ರಾಜಸ್ಥಾನದಲ್ಲಿಯ ವಿಂಧ್ಯಾಪೂರ್ವ ಶಿಲಾವರಣದ ವಿಂಗಡಣೆಗಳ ಪೈಕಿ ಮೊದಲನೆಯದು. ಆ ವಿಂಗಡಣೆಗಳಿವು:

	5. ಮಲಾನಿ ಅಗ್ನಿ ಶಿಲೆಗಳು
	4. ದೆಹಲಿ ಸಮುದಾಯ
	3. ರಯೊಲೊ ಸರಣಿ
	2. ಆರಾವಳಿ ಸಮುದಾಯ
	1. ಪಟ್ಟೆ ನೀಸಿಕ್ ಸಂಕೀರ್ಣ ಮತ್ತು ಬಂದೇಲ್‍ಖಂಡ್ ನೀಸ್

ಬುಂದೇಲ್‍ಖಂಡ್ ನೀಸಿನ ಮುಖ್ಯ ಶಿಲಾ ಹೊರಚಾಚಿಕೆ ಚಿತೋರ್ ಮತ್ತು ಬಿಲ್‍ವಾರಗಳ ನಡುವೆ ಕಂಡುಬಂದಿದೆ. ಇದರ ಉದ್ದ ಸುಮಾರು 112 ಕಿಮೀ. ಈ ಶಿಲಾವರಣದ ಮೇಳೆ ದಕ್ಷಿಣದಲ್ಲಿ ವಿಂಧ್ಯ ಶಿಲಾವರಣವೂ ಬೇರೆಡೆಗಳಲ್ಲಿ ಪಟ್ಟೆಯುಕ್ತ ನೀಸೂ ಪೇರಿಕೊಂಡಿವೆ. ಇದರ ನಿರ್ದಿಷ್ಟ ನಮೂನೆ ನಸುಗೆಂಪಿನಿಂದ ಕೆಂಪುಬಣ್ಣದವರೆಗಿನ ವರ್ಣದ್ದಾಗಿರುತ್ತದೆ. ಕಣದ ಗಾತ್ರ ಮಧ್ಯಮ; ಪತ್ರಣ (ಫೋಲಿಯೇಶನ್) ಇರುವುದಿಲ್ಲ ಮತ್ತು ಪಾರ್ಫಿರಿಟಿಕ್ ಆಗಿರುವುದಿಲ್ಲ. ಬೆಣಚು, ಆರ್ತೊಕ್ಲೇನ್, ಸಬಾರ್ಡಿನೇಟ್ ಮೈಕ್ರೊಕ್ಲೈನ್ ಮತ್ತು ಕಬ್ಬಿಣ-ಮೆಗ್ನೀಸಿಯಮ್ ಯುಕ್ತ ಖನಿಜಗಳು ಈ ಶಿಲಾವರಣದ ಪ್ರಧಾನ ಖನಿಜಗಳು.

	ಬುಂದೇಲ್‍ಖಂಡ್ ನೀಸ್ ಮತ್ತು ಪಟ್ಟೆ ನೀಸ್‍ಗೂ ನಡುವೆ ಆರಾವಳಿ ಶಿಲಾವರಣವಿರುತ್ತದೆ. ಹೀಗಾಗಿ ಈ ಎರಡು ನೀಸ್‍ಗಳ ನಡುವಣ ಸಂಬಂಧ ಸ್ಪಷ್ಟವಾಗಿಲ್ಲ. ಹೆರಾನರ ಪ್ರಕಾರ ಬುಂದೇಲ್‍ಖಂಡ್ ನೀಸ್ ಪಟ್ಟೆ ನೀಸ್‍ನ ಗ್ರಾನೈಟ್ ಭಾಗವನ್ನು ಒಳಗೊಂಡಿರಬಹುದು. ಬುಂದೇಲ್‍ಖಂಡ್ ನೀಸ್ ಶಿಲಾವರಣದ ಈಶಾನ್ಯ ತುದಿಯಲ್ಲಿ ಪುರಾತನ ಶಿಲಾವರಣಗಳಾದ ಕ್ವಾರ್ಟ್‍ಸೈಟ್, ಅರ್ಜಿಟೈಟ್, ಹಾರ್ನ್ ಬ್ಲೆಂಡ್-ಬಯೊಟೈಟ್ ಶಿಸ್ಟ್ ಇತ್ಯಾದಿಗಳ ಉಳಿಕೆಗಳು ಕಂಡುಬರುತ್ತವೆ.

	ಬುಂದೇಲ್‍ಖಂಡದ ಕೇಂಬ್ರಿಯನ್ ಪೂರ್ವ ಶಿಲೆಗಳು ನೆರೆಹೊರೆಯಲ್ಲಿರುವ ಡೆಕನ್‍ಟ್ರಾಪ್ ಮತ್ತು ವಿಂಧ್ಯ ಶಿಲಾವರಣಗಳಿಂದ ಬೇರಾಗಿವೆ. ಬುಂದೇಲ್ ಖಂಡದಲ್ಲಿ ಒಂದು ದೊಡ್ಡ ಅರ್ಧ ಚಂದ್ರಾಕಾರದ ನೀಸಿಕ್ ಗ್ರಾನೈಟ್ 320 ಕಿಮೀ ಉದ್ದ (ಪೂರ್ವ-ಪಶ್ಚಿಮ) 200 ಕಿಮೀ ಅಗಲ (ಉ-ದ) ಇರುತ್ತದೆ. 1859ರಲ್ಲಿ ಟಿ. ಓಲ್ಡ್‍ಹ್ಯಾಮ್, 1875ರಲ್ಲಿ ಮ್ಯಾಕ್‍ಮೋಹನ್ ಮತ್ತು 1936ರಲ್ಲಿ ಹೆರಾನ್ ಇವರು ಇದರ ಬಗ್ಗೆ ವಿವರಣೆಗಳನ್ನು ನೀಡಿದ್ದಾರೆ. ಈ ಶಿಲಾವರಣದ ನಿರ್ದಿಷ್ಟ ನಮೂನೆ ನಸುಗೆಂಪು ವರ್ಣ ಹೊಂದಿದ್ದು ಕಣಗಾತ್ರ ಮಧ್ಯಮವಾಗಿರುತ್ತದೆ. ಪತ್ರಣ ಅಪರೂಪವಾಗಿದ್ದು ಕೆಲವೊಮ್ಮೆ ಕಣಗಾತ್ರ ಹಿರಿದು ಅಥವಾ ಕಿರಿದಾಗಿ ಕಂಡುಬರುತ್ತದೆ. ಕೆಲವೆಡೆ ಪಾರ್ಫಿಂಟಿಕ್ ಆಗಿರುತ್ತದೆ.	
(ವೈ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ